ಕಾಚಿಹಣ್ಣಿನಗಿಡ

ಸೊಲನೇಸೀ ಕುಟುಂಬಕ್ಕೆ ಸೇರಿದ ಸೊಲೇನಮ್ ನೈಗ್ರಮ್ ಎಂಬ ವೈಜ್ಞಾನಿಕ ಹೆಸರಿನ ಏಕವಾರ್ಷಿಕ ಮೂಲಿಕೆ ಸಸ್ಯ. ಇದಕ್ಕೆ ಕರಿ ಕಾಚಿ ಗಿಡ, ಕಾಕಮುಂಜಿ ಎಂಬ ಹೆಸರುಗಳೂ ಇವೆ. ಸ್ವಾಭಾವಿಕವಾಗಿ ಇದು ಹೊಲ ಮತ್ತು ತೋಟಗಳಲ್ಲಿ ಕಳೆಸಸ್ಯವಾಗಿ ಬೆಳೆಯುತ್ತದೆ. ಇದರ ಎಲ್ಲ ಭಾಗಗಳನ್ನು ಆಯುರ್ವೇದ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಇದರ ಕಾಯಿ, ಎಲೆ ಮತ್ತು ಎಳೆಯ ಕಾಂಡಗಳನ್ನು ಮೂತ್ರೋತ್ತೇಜಕ, ಕಫ ಕತ್ತರಿಸುವ, ದೇಹದ ಪೋಷಣ ವ್ಯಾಪಾರಗಳನ್ನು ಬದಲಾಯಿಸಿ ಅವನ್ನು ಆರೋಗ್ಯಸ್ಥಿತಿಗೆ ತರುವಂಥ, ಶಾಮಕ ಔಷಧಿಗಳಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ಸಂಧಿವಾತ ರೋಗಕ್ಕೂ ಕೆಲವು ಚರ್ಮ ರೋಗಗಳಲ್ಲಿ ಬೆಚ್ಚಾರವಾಗೂ ಬಳಸುವುದುಂಟು. ಇದರ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ವಿಷವಾಗಿ ಪರಿಣಮಿಸುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಈ ಸಸ್ಯದ ಎಳೆಯ ಎಲೆಗಳನ್ನು ಸೊಪ್ಪಿನ ತರಕಾರಿಯಾಗಿ ಉಪಯೋಗಿಸುತ್ತಾರೆ.

 ಕಾಚಿಹಣ್ಣಿನ ಗಿಡ ಸುಮಾರು 3' ಎತ್ತರಕ್ಕೆ ಬೆಳೆಯುತ್ತದೆ. ಇದರ ಕಾಂಡ ಬಹುಕವಲೊಡೆದು ಹರಡಿರುತ್ತದೆ. ಎಲೆಗಳು ಸರಳ; ಪರ್ಯಾಯವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ ಅಂಚು ನಯವಾಗಿದೆ. ಹೂಗೊಂಚಲು ಮಧ್ಯಾರಂಭಿ (ಸೈಮೋಸ್) ಮಾದರಿಯದು. ಇದು ಎಲೆಗೆ ಅಭಿಮುಖವಾಗಿ ಹುಟ್ಟುತ್ತದೆ. ಹೂಗಳು ದ್ವಿಲಿಂಗಿಗಳು. ಒಂದೊಂದು ಹೂವಿನಲ್ಲೂ 5 ಸಂಯುಕ್ತ ಮಾದರಿಯ ಪುಷ್ಪಪತ್ರಗಳೂ ಒಂದರೊಡನೊಂದು ಕೂಡಿಕೊಂಡ 5 ದಳಗಳೂ 5 ಕೇಸರಿಗಳೂ ಎರಡು ಕಾರ್ಪೆಲುಗಳಿಂದಾದ ಉಚ್ಚಸ್ಥಾನದ ಅಂಡಾಶಯವೂ ಇವೆ. ಪುಷ್ಪಪತ್ರಗಳು ಕಾಯಲ್ಲೂ ಉಳಿದಿರುತ್ತವೆ. ದಳಗಳ ಬಣ್ಣ ಬಿಳಿ. ಕೇಸರಗಳು ದಳಗಳ ಬುಡಕ್ಕೆ ಅಂಟಿಕೊಂಡಿವೆ. ಫಲ ಬೆರಿ ಮಾದರಿಯದು. ಅದರ ಬಣ್ಣ ಕಪ್ಪು.      

 

(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ